ಬರೀದ್ ಶಾಹೀ ಮನೆತನ
	 1529-1619 ಬಹಮನೀ ರಾಜ್ಯದ ಅನಂತರ ಅಸ್ತಿತ್ವಕ್ಕೆ ಬಂದ ಐದು ಶಾಹೀ ರಾಜಮನೆತನಗಳಲ್ಲಿ ಒಂದು. ಮಂತ್ರಿಸ್ಥಾನದಿಂದಲೇ ಅಧಿಕಾರವನ್ನು ವಶಪಡಿಸಿಕೊಂಡು ಬಹುಮನೀ ರಾಜರ ಹೆಸರಿನಲ್ಲಿ ರಾಜ್ಯ ಆಳಲು ಆರಂಭಿಸಿದ ಖಾಸಿಂ ಬರೀದ್, ಶಾಹೀ ಮನೆತನದ ಮೂಲಪುರುಷ. ಇವನು ಜಾರ್ಜಿಯಾದಿಂದ ಬಂದು ಬಹಮನಿಯ ದೊರೆ 3ನೆಯ ಮಹಮ್ಮದನ ಕಾಲದಲ್ಲಿ ಸುಲ್ತಾನನ ಸೇವೆಗೆ ಸೇರಿದ್ದ. 1493ರಲ್ಲಿ ಕೊಂಕಣ ಹಾಗೂ ಪಶ್ಚಿಮ ಕರಾವಳಿಯಲ್ಲಿ ಬಂಡಾಯವೆದ್ದ ಬಹಾದ್ದೂರ್ ಜಿಲಾನಿಯೆಂಬ ಬಹಮನೀ ಅಧಿಕಾರಿಯನ್ನು ದೊರೆಯ ಜೊತೆಗೂಡಿ ಯುದ್ಧಮಾಡಿ ಸೋಲಿಸಿದ. ರಾಜಧಾನಿ ಬಿದರೆಯಲ್ಲಿ ಮುಖ್ಯಮಂತ್ರಿ ಮಹಮ್ಮೂದ್ ಗವಾನ್‍ನನ ಹತ್ಯೆಯಿಂದ ತೆರನಾದ ಆ ಸ್ಥಾನಕ್ಕೆ ಶಿಹಾಬುದ್ದೀನ್ ಮಹ್ಮೂದ್ ಖಾಸಿಂ ಬರೀದನನ್ನು 1492ರಲ್ಲಿ ಪ್ರಧಾನಮಂತ್ರಿಯಾಗಿ ನೇಮಿಸಿದ. ಬರೀದ್ ಮಂತ್ರಿ ಸ್ಥಾನವನ್ನು ಸ್ವೀಕರಿಸಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡ. ಬಹಮನೀವಂಶದ ಕೊನೆಯ ನಾಲ್ಕು ಜನ ರಾಜರಲ್ಲಿ ಶಿಹಾಬುದ್ದೀನ್ (1482-1518) ಕೇವಲ ಸುಖಲೋಲುಪನೂ ಅಶಕ್ತನೂ ಆದಕಾರಣ ಆತ ಮಂತ್ರಿಗಳ ಕೈಗೊಂಬೆಯಾದ. ಅನಂತರ ಪಟ್ಟಕ್ಕೆ ಬಂದ ಅಹಮ್ಮದ್, ವಲಿಯುಲ್ಲಾ ಹಾಗೂ ಕಲೀಮುಲ್ಲಾ ಇವರೆಲ್ಲರೂ ಹೆಸರಿಗೆ ಮಾತ್ರ ಸುಲ್ತಾನರಾಗಿದ್ದರು. ಅಧಿಕಾರ, ಆಡಳಿತವೆಲ್ಲ ಮುಖ್ಯ ವಜೀರರಾಗಿದ್ದ ಬರೀದ್‍ಶಾಹಿ ಮನೆತನದವರ ಹಿಡಿತದಲ್ಲಿತ್ತು. ಖಾಸಿಮ್ ಬರೀದ್ 1504ರಲ್ಲಿ ನಿಧನನಾಗಲು ಇವನ ಮಗ ಅಮೀರ್ ಅಲಿ ಬರೀದ್ ಮುಖ್ಯಮಂತ್ರಿಯಾದ. ತಂದೆಯಂತೆ ಇವನೂ ಸರ್ವಾಧಿಕಾರಿಯಾಗಿದ್ದ. ಈ ಕಾಲದಲ್ಲಿ ಬಿಜಾಪುರ, ಗೋಲ್ಕೊಂಡ ಮತ್ತು ಅಹಮದ್ ನಗರಗಳ ಜಹಗೀರುದಾರರುಗಳು ಸ್ವತಂತ್ರರಾಗಿದ್ದರು. ವಿಜಯನಗರದ ಕೃಷ್ಣದೇವರಾಯ ಬಹಮನೀ ರಾಜರಿಂದ ರಾಯಚೂರು ದೋ ಅಬ್ ಭೂಪ್ರದೇಶವನ್ನು ತನ್ನ ವಶಮಾಡಿಕೊಂಡ. ಈ ಎಲ್ಲವನ್ನೂ ಜಾಗರೂಕನಾಗಿ ನಿರೀಕ್ಷಿಸುತ್ತಿದ್ದ ಅಮೀರ್ 1529ರಲ್ಲಿ ಸ್ವತಂತ್ರನಾದ. ಬರೀದ್ ಶಾಹೀ, ಆದಿಲ್‍ಶಾಹೀ, ಮತ್ತು ಗೋಲ್ಕೊಂಡದ ಕುತುಬ್‍ಶಾಹೀ ಮನೆತನಗಳ ಒಳಗೊಳಗೇ ಕಚ್ಚಾಟ ನಡೆದಿತ್ತು. ಅಮೀರ್ ಬರೀದ್ ಒಮ್ಮೆ ಆಲ್‍ಶಾಹೀ ಇನ್ನೊಮ್ಮೆ ಗೋಲ್ಕೊಂಡ ಮಗದೊಮ್ಮೆ ಅಹಮ್ಮದ್‍ನಗರದ ನಿಜಾಮ್‍ಶಾಹೀ ದೊರೆಗಳ ಜೊತೆ ಸ್ನೇಹಬೆಳೆಸಿ ಒಬ್ಬರು ಇನ್ನೊಬ್ಬರ ಜೊತೆ ಯುದ್ಧ ಮಾಡುವಂತೆ ಮಾಡಿ ತಾನು ಅಧಿಕಾರದಲ್ಲಿರಲು ಹವಣಿಸುತ್ತಿದ್ದ. ಇದರಿಂದಾಗಿ ಅವನು `ದಕ್ಕನ್ನಿನ ನರಿ' ಎಂಬ ಹೆಸರಿಗೆ ಪಕ್ಕಾದ. ಬಿಜಾಪುರದ ಆದಿಲ್‍ಶಾಹೀ ದೊರೆ ಇಸ್ಮಾಯಿಲ್ ಆದಿಲ್‍ಖಾನ್ 1529ರಲ್ಲಿ ಬಿದರೆ ಕೋಟೆಯನ್ನು ಗೆದ್ದು ಅಮೀರ್ ಬರೀದನನ್ನು ಬಂಧಿಸಿದ. ಬರೀದ್ 1530ರಲ್ಲಿ ರಾಯಚೂರು ಮತ್ತು ಮುದ್ಗಲ್ ಪ್ರದೇಶಗಳನ್ನು ಬಿಜಾಪುರಕ್ಕೆ ವಹಿಸಿಕೊಡುವಲ್ಲಿ ಸಹಾಯ ಮಾಡಿದುದರಿಂದ ಸೆರೆಯಿಂದ ಬಿಡುಗಡೆ ಪಡೆದುದಲ್ಲದೆ ಬಿದರೆಯನ್ನು ಹಿಂದಕ್ಕೆ ಪಡೆದ. ಈತ 1542ರಲ್ಲಿ ದೌಲತಾಬಾದಿನಲ್ಲಿ ನಿಧನನಾದ. ತರುವಾಯ ಇವನ ಮಗ ಅಲಿಬರೀದ್ (1542-80) ಅಧಿಕಾರಕ್ಕೆ ಬಂದು ಷಾ ಎಂಬ ಸಾರ್ವಭೌಮಸೂಚಕ ಬಿರುದನ್ನು ಇಟ್ಟುಕೊಂಡು ಪ್ರಥಮ ಬರೀದ್ ಶಾಹೀ ಸುಲ್ತಾನನಾದ.

	ಅಲಿಬರೀದ್ ಬಿಜಾಪುರದ ತಾನೀಪುರದ ತಾನೀಬೀಬಿಯನ್ನು ಮದುವೆಯಾಗಿದ್ದ. ಶಾಹೀ ಮನೆತನಗಳಲ್ಲಿ ಯುದ್ಧ ಸಾಮಾನ್ಯ ವಿಷಯವಾಗಿತ್ತು. ಅಲಿಬರೀದ್ ಹಾಗೂ ಬಿಜಾಪುರದ ಸೈನ್ಯ ಒಟ್ಟುಗೂಡಿ ಅಹಮದ್‍ನಗರ್ (ನಿಜಾಮ್ ಶಾಹೀ) ಬಿರಾರ್ (ಇಮಾದ್ ಶಾಹೀ), ಗೋಲ್ಕೊಂಡ (ಕುತುಬ್ ಶಾಹೀ) ಮತ್ತು ವಿಜಯನಗರ ದೊರೆಗಳ ವಿರುದ್ಧ ಯುದ್ಧ ಮಾಡಿತು. ಆದರೆ ಇವರ ಜಂಟಿ ಸೈನ್ಯ ಸೋತಿತು. ಮುಂದೆ ಬಿಜಾಪುರ ಮತ್ತು ಅಹಮ್ಮದ್ ನಗರದ ಸುಲ್ತಾನರ ಮಧ್ಯೆ ಗುಪ್ತ ಒಪ್ಪಂದವಾಗಿ ಅಹಮ್ಮದ್‍ನಗರದವರು ಬಿದರೆಯನ್ನು ಮುತ್ತಿ ವಶಪಡಿಸಿಕೊಂಡರು. ಅಲಿಬರೀದ್ ಸೆರೆಯಾಳಾದ. ಇತ್ತ ಗೋಲ್ಕೊಂಡದವರೂ ಪ್ರಬಲರಾಗಿ ತಮ್ಮ ರಾಜ್ಯದ ಎಲ್ಲೆಗಳನ್ನು ಹಿಗ್ಗಿಸಿಕೊಂಡರೂ ಅಲಿ ಬರೀದನ ಬಿಡುಗಡೆಗೆ ಸಹಾಯ ಮಾಡಿದರು. 1548ರಲ್ಲಿ ಅಲಿಬರೀದ್ ಬಿಡುಗಡೆ ಹೊಂದಿದ. ಬಿದರೆ ರಾಜ್ಯದ ಕೆಲವು ಪ್ರದೇಶಗಳು ಗೋಲ್ಕೊಂಡದ ಕುತುಬ್‍ಶಾಹೀಯವರ ಪಾಲಾದುವು. ಅಲಿಬರೀದನ ಕಾಲಕ್ಕೇ ಬರೀದ್‍ಶಾಹೀ ಮನೆತನ ತನ್ನ ಹಿರಿಮೆಯನ್ನು ಮುಟ್ಟಿ ಅನಂತರ ಇಳಿಮುಖವಾಗುತ್ತ ಬಂತು. ಅಲಿಬರೀದ್ ವಿಜಯನಗರದ ವಿರುದ್ಧ ನಡೆದ ತಾಳೀಕೋಟೆ ಯುದ್ಧದಲ್ಲಿ ದಖನ್ನಿನ ಸುಲ್ತಾನರ ಒಕ್ಕೂಟದಲ್ಲಿ ಸೇರಿದ್ದ. ಸುಲ್ತಾನರುಗಳು ಗೆದ್ದರೂ ಬಿದರೆಗೇನೂ ಪ್ರಯೋಜನವಾಗಲಿಲ್ಲ. ಅಹಮ್ಮದ್ ನಗರದ ನಿಜಾಮ್ ಷಾ ಬಿದರೆ ರಾಜ್ಯದ ಹೆಚ್ಚುಭಾಗಗಳನ್ನು ಗೆದ್ದುಕೊಂಡ. ಅಲಿಬರೀದ್ 1580ರಲ್ಲಿ ಮರಣಹೊಂದಿದ.

	ಅಲಿಬರೀದನ ಅನಂತರ ಅವನ ಮಗ ಇಬ್ರಾಹಿಮ್ ಬರೀದ್ (1580-87) ಸುಮಾರು ಏಳು ವರ್ಷಕಾಲ ರಾಜ್ಯವಾಳಿದ. ಅನಂತರ ಅವನ ತಮ್ಮ 2ನೆಯ ಖಾಸಿಮ್ ಬರೀದ್ (1587-91) ರಾಜ್ಯವಾಳಿದ. 2ನೆಯ ಖಾಸಿಮ್ ಬರೀದನ ಮರಣಾ ನಂತರ ಆತನ ಎಳೆವಯಸ್ಸಿನ ಪುತ್ರ ಪಟ್ಟವೇರಿದ. ರಾಜ ಸಂಬಂಧಿಯೊಬ್ಬ ಈ ಬಾಲಕನನ್ನು ಪದಚ್ಯುತಿಗೊಳಿಸಿ 2ನೆಯ ಅಮೀರ್ ಬರೀದ್ ಷಾ ಎಂಬ ಹೆಸರಿನಿಂದ ಸುಮಾರು ಹತ್ತು ವರ್ಷ ಕಾಲ ರಾಜ್ಯವಾಳಿದ. ಅನಂತರ ಇವನ ಮಗ ಮಿರ್ಜಾ ಅಲಿ ಬರೀದ್ 1601-09 ಅವಧಿಯಲ್ಲಿ ರಾಜ್ಯವಾಳಿದ. ಅನಂತರ 3ನೆಯ ಅಮೀರ್ ಬರೀದ್ ಷಾ ಎಂಬವನು 1609ರಲ್ಲಿ ಪಟ್ಟಕ್ಕೆ ಬಂದ. ಇವರೆಲ್ಲರೂ ದುರ್ಬಲರಾಗಿದ್ದು ದಿನೇ ದಿನೇ ಬರೀದ್ ಶಾಹೀ ಮನೆತನದ ಆಳ್ವಿಕೆ ಕುಗ್ಗುತ್ತ ನಡೆದು ಬಿದರೆ ರಾಜ್ಯ ದುರ್ಬಲವಾಯಿತು. ಇವನೇ ಬರೀದ್ ಶಾಹೀ ವಂಶದ ಕೊನೆಯ ಸುಲ್ತಾನ ಇವನು 1616ರಲ್ಲಿ ದಖನ್ನಿನ ಸುಲ್ತಾನರೊಡನೆ ಮೊಗಲರನ್ನು ಎದುರಿಸಿದುದೊಂದೆ ಉಲ್ಲೇಖನಾರ್ಹ ವಿಷಯ. 1619ರಲ್ಲಿ ಬಿಜಾಪುರದ 2ನೆಯ ಇಬ್ರಾಹಿಮ್ ಆದಿಲಾಷಾ ಬಿದರೆಯನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡಾಗ ಬರೀದ್ ಶಾಹೀ ಆಳ್ವಿಕೆಯ ಅಂತ್ಯವಾಯಿತು.

	ಬಿದರೆಯ ಹಾಗೂ ಅದರ ಸುತ್ತ ಇನ್ನೂ ಉಳಿದಿರುವ ಕಟ್ಟಡಗಳು, ಕೋಟೆ ಮತ್ತು ತೋಪುಗಳು ಬರೀದ್ ಶಾಹೀ ಮನೆತನದವರ ಇತಿಹಾಸವನ್ನೂ ಅವರ ವಾಸ್ತು ಶಿಲ್ಪಕಲೆಯನ್ನೂ ಯುದ್ಧದಲ್ಲಿ ಅವರು ಬಳಸಿದ ಆಯುಧಗಳನ್ನೂ ಸೂಚಿಸುವ ದಾಖಲೆಗಳಾಗಿವೆ. ಕಟ್ಟಡಗಳಲ್ಲಿ ಮುಖ್ಯವಾದವೆಂದರೆ ಬರೀದ್ ಶಾಹೀ ರಾಜರ ಗುಂಬಜ್‍ಗಳು, ರಂಗೀನ್‍ಮಹಲ್, ಗಗನ್‍ಮಹಲ್, ತರ್ಕಿಷ್ ಮಹಲ್, ಚೀನಿಮಹಲ್, ನಗೀನಾಮಹಲ್ ಮತ್ತು ಶಾಹೀ ಸ್ನಾನಗೃಹ. ಗುಂಬಜ್‍ಗಳಲ್ಲಿ ಅತಿ ಮುಖ್ಯವಾದದ್ದೂ ಸುಂದರವಾದದ್ದೂ ಎಂದರೆ ಅಲಿಬರೀದ್ ದೊರೆಯದು. ಸಮಾಧಿಯನ್ನೂ ಸಂಪೂರ್ಣ ಅಮೃತಶಿಲೆಯಿಂದ ಕಟ್ಟಿದೆ. ಒಳಗಿನ ಗೋಡೆಗಳಲ್ಲಿ ಚೀನಿ ಕರಕೌಶಲದ ಚಿತ್ರಗಳಿವೆ. ಅಲ್ಲಲ್ಲಿ ಶಾಸನ ಹಾಗೂ ಹೂಬಳ್ಳಿಗಳನ್ನು ಬಂಗಾರದ ಬಣ್ಣದಲ್ಲಿ ಬಿಡಿಸಿದೆ. ಅಲಿಬರೀದ್ ಕಟ್ಟಿಸಿದ ರಂಗೀನ್ ಮಹಲ್ ಅಲಂಕರಿಸಿದ್ದಾರೆ. ಇಲ್ಲಿ ಸುಂದರವಾದ ನಾಜೂಕಿನ ಮರದ ಕೆತ್ತನೆಗಳಿವೆ. ಚಿತ್ರಗಳಿಗೆ ಇಲ್ಲಿ ಜೋಡಿಸಿರುವ ಮುತ್ತಿನಗುಚ್ಛಗಳು, ಸಿಂಪುಗಳು, ತುಂಬಾ ಆಕರ್ಷಕವಾಗಿವೆ.

	ಬಿದರೆ ಕೋಟೆಯನ್ನು ಬಹುಮನೀ ರಾಜರ ಕಾಲದಲ್ಲಿ ಕಟ್ಟಿದ್ದಾದರೂ ರಂಗೀನ್ ಮಹಲ್ ಬಳಿಯ ಬುರ್ಜೊಂದು ಬರೀದ್‍ಶಾಹೀ ರಾಜರ ಎರಡು ತೋಪುಗಳನ್ನು ಇಂದಿಗೂ ಹೊತ್ತುನಿಂತಿದೆ. ಇದರಲ್ಲಿ ಒಂದು ತೋಪು ಬಿಜಾಪುರದ ಮುಲ್ಕ ಮೈದಾನ್‍ತೋಪನ್ನು ಹೋಲುತ್ತದೆ. ಇದರ ಮೇಲೆ ಖಾಸಿಮ್ ಬರೀದ್ ಷಾನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದೆ. ಈ ದೊಡ್ಡ ತೋಪಿನ ಬಳಿಯಲ್ಲೇ ಅಲಿಬರೀದ್ ಷಾನ ಕಾಲದ ತುಂಬ ಉದ್ದವಾದ ಒಂದು ತೋಪಿದೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ